ಆಖ್ಯಾನಕ
ಆಖ್ಯಾನದ ಒಂದು ರೂಪಾಂತರವಾಗಿರಬಹುದು ಪ್ರಖ್ಯಾತ ವ್ಯಕ್ತಿಗಳ ಸಾಹಸ ಕಾರ್ಯಗಳ, ಮಹತ್ವ, ಇದಕ್ಕೆ ಸಂಬಂಧಪಟ್ಟ ಮತ್ತು ಅತಿ ದೀರ್ಘವಲ್ಲದ ಕಥೆ. ಕೇವಲ ಕಾಲ್ಪನಿಕವಾಗಿರದೆ ಐತಿಹಾಸಿಕಾಂಶನ್ನೊಳಗೊಂಡಿರುತ್ತದೆ. ಸಂಸ್ಕøತದಲ್ಲಿ ಚೂರ್ಣಕವೆಂಬ ಹೆಸರಿನ ಗದ್ಯ ರಚನೆಗೆ ಸಮಾನವೆಂದು ಕಾದಂಬರಿಕಾರನಾದ ಭಾನುಚಂದ್ರನ ಮತ.

ಇಂಗ್ಲಿಷ್ ಭಾಷೆಯ ಎನೆಕ್‍ಡೋಟ್ಸ್ ಪದಕ್ಕೆ ಸಮಾನಾರ್ಥದಲ್ಲಿ ಆಖ್ಯಾನಕ ಪದವನ್ನು ಬಳಸುವುದುಂಟು. ಒಬ್ಬ ವ್ಯಕ್ತಿಯನ್ನು ಕುರಿತು ಆತನ ಪರಿಚಿತರ ವಲಯದಲ್ಲಿ ಪ್ರಚಲಿತವಾಗಿರುವ, ಜನ ಸತ್ಯವೆಂದೇ ನಂಬಿರುವ ಕಥೆ; ಚರಿತ್ರೆಯ ಅಪ್ರಕಟಿತ ವಿವರಗಳು; ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗೆ ಸಂಬಂಧಿಸಿದ ಮತ್ತು ಆತನ ಗುಣ ವೈಶಿಷ್ಟ್ಯವನ್ನು ಸೂಚಿಸುವ, ಅನೇಕ ವೇಳೆ ವಿನೋದ ಪ್ರಧಾನಾಂಶವಾಗಿರುವ ಕರುಬು ಕೊಂಕು ಲೇಶವೂ ಇರದ, ಒಂದು ಪ್ರತ್ಯೇಕ ಘಟನೆಯ ವರದಿ-ಎಂಬೀ ವಿವರಗಳು ಎನೆಕ್‍ಡೋಟ್ ಪದವನ್ನು ಕುರಿತು ದೊರೆಯುತ್ತವೆ.

ಪ್ರಸಿದ್ಧ ವ್ಯಕ್ತಿಗಳ ಆಖ್ಯಾನಕಗಳ ಸಂಕಲನ ಗ್ರಂಥಗಳು ಇಂಗ್ಲಿಷ್ ಸಾಹಿತ್ಯದಲ್ಲಿವೆ. ಆದರೂ ಇದೊಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿ ಬೆಳೆದಂತಿಲ್ಲ. ಚರಿತ್ರೆ (ಇಲ್ಲಿ ರಾಷ್ಟ್ರ ಪ್ರಧಾನ, ವ್ಯಕ್ತಿ ಗೌಣ), ಜೀವನಚರಿತ್ರೆ ಮತ್ತು ಆತ್ಮಚರಿತ್ರೆ (ಇವೆರಡರಲ್ಲೂ ವ್ಯಕ್ತಿ ಪ್ರಧಾನ) ಎಂಬೀ ಸ್ಪಷ್ಟ ಮೂರು ಸಾಹಿತ್ಯ ಪ್ರಕಾರಗಳಿಂದ ಆಖ್ಯಾನಕಗಳನ್ನು ಉದ್ಧರಿಸಬಹುದು.

ವ್ಯಕ್ತಿಯ ಗುಣವೈಶಿಷ್ಟ್ಯವನ್ನು ಸೂಚಿಸುವ, ಇತರರ ದೃಷ್ಟಿಯಲ್ಲಿ ಅಪೂರ್ವವೂ ಅನಿರೀಕ್ಷಿತವೂ ಆದ ಘಟನೆ ಆಖ್ಯಾನಕ. ಇಲ್ಲಿ ಘಟನೆ ಎಂಬ ಪದವನ್ನು ವಿಶಾಲಾರ್ಥದಲ್ಲಿ-ಮಾತು. ಬರೆವಣಿಗೆ, ಕೃತಿ, ಅಭಿನಯ ಇತ್ಯಾದಿ ಬಳಸಲಾಗಿದೆ. ಎರಡು ಉದಾಹರಣೆಗಳಿಂದ ಈ ವ್ಯಾಖ್ಯೆಯನ್ನು ಸ್ಪಷ್ಟಪಡಿಸಬಹುದು.

“ಕುವೆಂಪು ಅವರು ನಾಗವರ್ಮನ ಕರ್ಣಾಟಕ ಕಾದಂಬರೀ ಸಂಗ್ರಹವನ್ನು ಪಾಠ ಹೇಳುತ್ತಿದ್ದಾರೆ. ಅದರಲ್ಲಿ ಮಹಾಶ್ವೇತೆಗೆ ಸಂಬಂಧಿಸಿದ ಒಂದು ಪದ್ಯವನ್ನು ಸುಮಾರು ಮೂವತ್ತು ನಿಮಿಷಗಳ ಕಾಲ ವಿಶದಪಡಿಸಿದ್ದಾರೆ. ಆಗಲೇ ನಾವು ಕಾವ್ಯದ ಭವ್ಯತೆಯ ಕಡೆಗೆ ಗಮನ ಕೊಟ್ಟದ್ದು. ಆದರೆ ವ್ಯಾಖ್ಯಾನ ಮುಗಿಯುತ್ತಿದ್ದಂತೆ ತರಗತಿಯಲ್ಲಿದ್ದ ನನ್ನ ಸ್ನೇಹಿತ ಒಬ್ಬ ಎದ್ದು ನಿಂತು ಸಾರ್, ನನಗೆ ಚೆನ್ನಾಗಿ ಅರ್ಥವಾಗಲಿಲ್ಲ. ಇನ್ನೊಂದು ಸಾರಿ ಹೇಳಿ. ಎಂದ... ತತ್‍ಕ್ಷಣ ಕುವೆಂಪು ಹೇಳಿದರು "ದಂಡಕಾರಣ್ಯಕ್ಕೆ ಎಷ್ಟು ಲಾಂದ್ರ ಹಿಡಿದರೆ ತಾನೆ ಬೆಳಕಾದೀತು.” 				   (ಎನ್. ಪ್ರಹ್ಲಾದರಾವ್: ಮುತ್ತಿನಹಾರ)

ನಮ್ಮ ಜನ ಗುಡ್ಸ್ ಬಂಡಿಗಳ ಹಾಗೆ. ವಿಶ್ವೇಶ್ವರಯ್ಯನವರು ಒಳ್ಳೆಯ ಎಂಜಿನ್ ಹಾಗೆ. ಎಂಜಿನ್ ಬಂಡಿಗಳನ್ನು ಒಂದು ಸಲ ಎಳೆಯಿತು. ಇವು ಜಗ್ಗಲಿಲ್ಲ. ಇನ್ನೊಂದು ಸಲ ಎಳೆಯಿತು. ಇವು ಜಗ್ಗಲಿಲ್ಲ. ಇನ್ನೊಂದು ಸಲ ಎಳೆದಾಗ ಎಂಜಿನ್ನೇ ಕಳಚಿಕೊಂಡು 'ಹೊರಟೇ ಹೋಯಿತು. ಬಂಡಿಗಳು ಇದ್ದ ಕಡೆಯೇ ಇದ್ದು ಬಿಟ್ಟವು: (ಇಷ್ಟು ಕಥೆಯನ್ನು ಹೇಳುವಾಗ ಮುಂದಿನ ವಿಸ್ತರಣ ಕ್ಷಣದಲ್ಲಿ ಮಾಸ್ತಿಯವರಿಗೆ ಹೊಳೆಯಿತಂತೆ): ಬಂಡಿಗಳು ಯಾಕೆ ಕದಲಲಿಲ್ಲ ಗೊತ್ತೆ? ಎಂಜಿನ್ ಕೊಕ್ಕೆ (ಹೂಕ್) ಬಂಡಿಗೆ ಸರಿಯಾಗಿ ತಗಲಿರಲಿಲ್ಲ.! ಈ ಕೊಕ್ಕೆ ಯಾವುದು? ಕನ್ನಡಮಾತು. ವಿಶ್ವೇಶ್ವರಯ್ಯನವರು ತಮ್ಮ ಉದ್ದೇಶಗಳನ್ನು ಧ್ಯೇಯಗಳನ್ನು ಜನಕ್ಕೆ ತಿಳಿಯುವ ಹಾಗೆ ಕನ್ನಡದಲ್ಲಿ ಹೇಳಿ ಜನಸಾಮಾನ್ಯರ ಮನಸ್ಸಿಗೆ ಹತ್ತಿಸಿದ್ದರೆ ಅವರ ಪ್ರಗತಿಯ ಭಾವನೆಗಳಲ್ಲಿ ಜನಗಳು ಭಾಗಿಗಳಾಗುತ್ತಿದ್ದರು. ಆದರೆ ವಿಶ್ವೇಶ್ವರಯ್ಯನವರ ಭಾವನೆಗಳೆಲ್ಲ ಆಲೋಚನೆಯೆಲ್ಲ ಇಂಗ್ಲಿಷ್‍ನಲ್ಲಿ! ಜನಸಾಮಾನ್ಯಕ್ಕೂ ಅವರಿಗೂ ಬಿಗಿಯಾದ ಸಂಬಂಧವೇ ಏರ್ಪಡಲಿಲ್ಲ.  									
(ದೇಜಗೌ : ತೀನಂಶ್ರೀ)

ಆಖ್ಯಾನಕದ ಕೇಂದ್ರ ವ್ಯಕ್ತಿ. ಆದರೆ ಉದ್ದೇಶಪೂರ್ವಕವಾಗಿ ವ್ಯಕ್ತಿ ಅದನ್ನು ಸೃಷ್ಟಿಸುವುದಿಲ್ಲ. ಸಹಜವಾಗಿ ಅವನಿಂದ ಅದು ಸಿಡಿಯುವುದರಿಂದ ಭಾಷಣ, ಬರೆವಣಿಗೆ, ಚಿತ್ರಣ ಮುಂತಾದ ಆತನು ಬೇರೆ ಯಾವುದೇ ವಿಧದ ಅಭಿವ್ಯಕ್ತಿಯಲ್ಲಿ ಇಲ್ಲದ ಪರಿಪೂರ್ಣತೆ, ಅನೈಚ್ಛಿಕತೆ ಇದರಲ್ಲಿ ಕಾಣುತ್ತದೆ. ಈ ದೃಷ್ಟಿಯಲ್ಲಿ ವ್ಯಕ್ತಿಯ ಮನಸ್ಸಿನ ಆಳವನ್ನು ಅರಿಯಲು ಆಖ್ಯಾನಕ ಅತ್ಯುಪಯುಕ್ತ.

ಪ್ರಾಮಾಣಿಕವಾಗಿ ನಿರೂಪಣೆಗೊಂಡಿರುವ ಆಖ್ಯಾನಕಗಳ ಅಭ್ಯಾಸ ಸಮಕಾಲೀನ ಚರಿತ್ರೆ, ಜೀವನ  ಆತ್ಮಚರಿತ್ರೆಗಳ ನಿಖರತೆಯ ಮೇಲೆ ಬೆಳಕು ಬೀರುವುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ